ನೀಲ್, ಜೆ -
	1857 ಬಂಡಾಯದ ಸಮಯದಲ್ಲಿ ಈಸ್ಟ್ ಇಂಡಿಯಾ ಕಂಪೆನಿಯಲ್ಲಿ ಸೈನ್ಯಾಧಿಕಾರಿಯಾಗಿದ್ದವ ; ಬ್ರಿಗೇಡಿಯರ್ ಜನರಲ್. ಜೂನ್ 11ರಂದು ಅಲಹಾಬಾದ್ ಕೋಟೆ ಬಂಡಾಯಗಾರರ ವಶವಾಗುತ್ತಿದ್ದುದನ್ನು ನೀಲ್ ಸಾಹಸದಿಂದ ತಪ್ಪಿಸಿದ. ಅನಂತರ ಹ್ಯಾವ್‍ಲಾಕನ ನೇತೃತ್ವದಲ್ಲಿ ಬಂದ ಇನ್ನೊಂದು ಬ್ರಿಟಿಷ್ ಸೈನ್ಯವೂ ಇವನ ನೇತೃತ್ವದ ಸೈನ್ಯವೂ ಸೇರಿಕೊಂಡು ಕಾನ್ಪುರದ ಮುತ್ತಿಗೆಯನ್ನು ತೆರವು ಮಾಡಲು ಹೋಯಿತು. ನೀಲ್ ಮಾರ್ಗದ ಉದ್ದಕ್ಕೂ ನಿರಪರಾಧಿ ಭಾರತೀಯರನ್ನು ನಿರ್ದಯೆಯಿಂದ ಕೊಲ್ಲುತ್ತಾ ಸಾಗಿದ. ಬ್ರಿಟಿಷರೂ ಬಂಡಾಯಗಾರೂ ಪರಸ್ಪರ ಸೇಡು ತೀರಿಸಿಕೊಳ್ಳಲು ತೊಡಗುವಂತಾದುದಕ್ಕೆ ನೀಲನ ಕೃತ್ಯಗಳೂ ಕಾರಣ. ನೀಲ್ ಕಾನ್ಪುರವನ್ನು ಹಿಡಿದುಕೊಳ್ಳುವುದಕ್ಕೆ ಮೊದಲೇ ಅಲ್ಲಿಯ ಬೀಬಿಘರದಲ್ಲಿ ಇನ್ನೂರ ಹನ್ನೊಂದು ಮಂದಿ ಕೊಲೆಗೆ ಒಳಗಾಗಿದ್ದರು. ನೀಲ್ ಮತ್ತು ಹ್ಯಾವ್‍ಲಾಕರು ಕಾನ್ಪುರವನ್ನು ಪುನಃ ವಶಪಡಿಸಿಕೊಂಡರು. ನೀಲ್ ಕಾನ್ಪುರದಲ್ಲಿಯೇ ನಿಂತು ಕೈಗೆ ಸಿಕ್ಕಿದ ಭಾರತೀಯರನ್ನೆಲ್ಲ ಹಿಡಿದು ಕಾನ್ಪುರ-ಲಕ್ನೋ ರಸ್ತೆ ಬದಿಯ ಸಾಲುಮರಗಳಿಗೆ ನೇಣು ಹಾಕಿಸಿ ಕೊಲ್ಲಿಸಿದ. ಕೊನೆಗೆ ಅಲ್ಲಿಯ ಬೀದಿಯಲ್ಲಿ ನಡೆದ ಕದನವೊಂದರಲ್ಲಿ ಪ್ರಾಣತೆತ್ತ.								(ಆರ್.ಜಿ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ